ಭಾರತದ ಕರ್ನಾಟಕ ರಾಜ್ಯದ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಒಂದು ಇತಿಹಾಸ ಪ್ರಸಿದ್ಧ ಪಟ್ಟಣ. ಕಸಬೆಯಿಂದ ನೈಋತ್ಯಕ್ಕೆ 21 ಕಿಮೀ ದೂರದಲ್ಲಿದೆ. ಜನಸಂಖ್ಯೆ 33,411.

ಪ್ರಾಚೀನ ಶಾಸನಗಳಲ್ಲಿ ಮತ್ತು ಗ್ರಂಥಗಳಲ್ಲಿ ಈ ಊರಿನ ಹೆಸರು ಪುಲಿಗೆರೆ, ಪುರಿಗೆರೆ, ಪುಲಿಕರ ಮೊದಲಾದ ರೂಪಗಳಲ್ಲಿ ಕಂಡು ಬರುತ್ತದೆ. ಲಕ್ಷ್ಮರಸ ಸು. 11ನೆಯ ಶತಮಾನದಲ್ಲಿ ಲಕ್ಷ್ಮೇಶ್ವರ ಎಂಬ ದೇವಾಲಯವನ್ನು ಕಟ್ಟಿಸಿದುದರಿಂದ ಅದರ ಹೆಸರೇ ಕ್ರಮೇಣ ಊರಿಗೆ ಬಂದಿರಬೇಕೆಂದು ಊಹೆಯಿದೆ. ಬಾದಾಮಿ ಚಳುಕ್ಯರ ಕಾಲದಿಂದ ಹಿಡಿದು ಸು. 16ನೆಯ ಶತಮಾನದ ಅಂತ್ಯದವರೆಗೆ ಇದು ಪುಲಿಗೆರೆ 200 ವಿಭಾಗದ ಆಡಳಿತ ಕೇಂದ್ರವಾಗಿತ್ತು. ಕವಿರಾಜಮಾರ್ಗ ಹಾಗೂ ವಿಕ್ರಮಾರ್ಜುನವಿಜಯ ಇದನ್ನು ತಿರುಳುಕನ್ನಡದ ಸೀಮೆಯಲ್ಲಿ ಒಂದೆಂದು ವರ್ಣಿಸಿವೆ.

ಇಲ್ಲಿಯ ಶಂಖಬಸದಿ ಅಥವಾ ಜಿನಭಟ್ಟಾರಕ ಜಿನಾಲಯ ಮೂಲ ಸಂಘಕ್ಕೆ ಸಂಬಂಧಿಸಿದ್ದು ಇದು ಇಲ್ಲಿಯ ಅತ್ಯಂತ ಪ್ರಾಚೀನ ಬಸದಿ. ಪ್ರಾಯಃ ಬಾದಾಮಿ ಚಳುಕ್ಯರ ಕಾಲದ್ದು. ಇಲ್ಲಿನ ಆನೆಸಜ್ಜೆ ಬಸದಿಯನ್ನು ಚಳುಕ್ಯ ವಿಜಯಾದಿತ್ಯನ ತಂಗಿ ಕುಂಕಮ ಮಹಾದೇವಿ ಕಟ್ಟಿಸಿದಳು ಎಂಬುದಕ್ಕೆ ಶಾಸನೋಲ್ಲೇಖವಿದೆ. 12ನೆಯ ಶತಮಾನದಿಂದ ಇಲ್ಲಿ ಶೈವಧರ್ಮ ಪ್ರಬಲವಾಯಿತು. ಹಲವು ಶೈವದೇವಾಲಯಗಳನ್ನು ಕಟ್ಟಲಾಯಿತು. ಇವುಗಳಲ್ಲಿ ಸೋಮೇಶ್ವರ ದೇವಾಲಯ ಬಹುಪ್ರಸಿದ್ಧ ವಾಗಿತ್ತು. ಹರಿಹರನ ಆದಯ್ಯನ ರಗಳೆ ಮತ್ತು ರಾಘವಾಂಕನ ಸೋಮನಾಥ ಚರಿತೆಗಳಲ್ಲಿ ಈ ಸೋಮನಾಥನ ಪ್ರತಿಮೆಯ ವಿಷಯವಿದೆ. ಹೋಜೇಶ್ವರ ಅಥವಾ ವಾಜೇಶ್ವರ ಇಲ್ಲಿಯ ಮತ್ತೊಂದು ಮುಖ್ಯ ದೇವಾಲಯ. ಇದು ಕಲ್ಯಾಣ ಚಾಳುಕ್ಯರ ಕಾಲಕ್ಕಿಂತಲೂ ಪೂರ್ವದ್ದು. ಇಲ್ಲಿ ಸು. 50ಕ್ಕೂ ಹೆಚ್ಚು ಕನ್ನಡ ಹಾಗೂ ಸಂಸ್ಕೃತ ಶಾಸನಗಳು ದೊರೆತಿವೆ. ಇವುಗಳಲ್ಲಿ ಅರ್ಧದಷ್ಟು ಜೈನಧರ್ಮಕ್ಕೆ ಸಂಬಂಧಪಟ್ಟವು. ಈ ಊರು ಪಂಚಮಠ ಸ್ಥಾನವಾಗಿತ್ತು. ವೀರಶೈವ ಪಂಚಾಚಾರ್ಯರಲ್ಲಿ ಒಬ್ಬರಾದ ರೇವಣಸಿದ್ಧರ ಹಾಗೂ ಮೂರುಜಾವ ದೇವಮುನಿಯ ಉಲ್ಲೇಖಗಳು ಶಾಸನಗಳಲ್ಲಿವೆ. 12ನೆಯ ಶತಮಾನದಲ್ಲಿ ಇಲ್ಲಿ ಒಂದು ಘಟಿಕಾಸ್ಥಾನವಿತ್ತು. ಕಳಚುರಿ ಬಿಜ್ಜಳನ ಕಾಲದ ಶ್ರೀಧರನೆಂಬ ಅಧಿಕಾರಿ, ಬ್ರಾಹ್ಮಣರಿಗಾಗಿ ಒಂದು ಬ್ರಹ್ಮಪುರಿಯನ್ನೂ ರಾಷ್ಟ್ರಕೂಟ ಜಯಕೇಶಿ ಅರಸ ಒಂದು ಪುರವನ್ನೂ ನಿರ್ಮಿಸಿದರು. ಕರ್ನಾಡಸುಕವಿ, ನಾಗಾರ್ಜುನ ಕವಿ, ನಾಗದೇವ ಎಂಬ ಕವಿಗಳ ಉಲ್ಲೇಖಗಳೂ ಶಾಸನಗಳಲ್ಲಿವೆ. 1152ರ ಒಂದು ಶಾಸನದಲ್ಲಿ ನಯಸೇನ ಸೂರಿ ಎಂಬ ಕವಿಯ ಕೀರ್ತಿಯನ್ನು ಮನೋಹರವಾಗಿ ವರ್ಣಿಸಲಾಗಿದೆ. ಬ್ರಹ್ಮಶಿವ, ಪುಲಿಗೆರೆ ಸೋಮ, ಮಹಾಲಿಂಗದೇವ, ಸುರಕವಿ, ಸಿಂಹರಾಜ ಎಂಬ ಕವಿಗಳು ಈ ಸ್ಥಳದವರೆಂದು ತೋರುತ್ತದೆ. ಮುಮ್ಮರಿ ದಂಡಗಳು ಎಂಬ ವಾಣಿಜ್ಯ ಸಂಘದ ಶಾಖೆಯೂ ಇಲ್ಲಿತ್ತು.

ಸುಮಾರು ಸಾವಿರ ವರ್ಷಗಳವರೆಗೆ ವಿವಿಧ ಧರ್ಮಗಳ, ವಾಸ್ತು ಮತ್ತು ಮೂರ್ತಿಶಿಲ್ಪ, ಕಾವ್ಯರಚನೆ, ವ್ಯಾಪಾರ ಮತ್ತು ಆಡಳಿತ ಕೇಂದ್ರವಾಗಿದ್ದ ಕರ್ನಾಟಕ ಸಂಸ್ಕøತಿಯ ಹಿರಿಮೆಯುಳ್ಳ ಸ್ಥಳಗಳಲ್ಲಿ ಇದು ಒಂದು ಪ್ರಮುಖ ಸ್ಥಳವಾಗಿದೆ.
	
(ಎ.ಎಸ್‍ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ